ನೀಲಾಂಬಿಕೆ -
ಸು. 1160. ಶಿವಶರಣೆ, ವಚನಾಕಾರ್ತಿ. ಬಿಜ್ಜಳರಾಜನ ಸಾಕುತಂಗಿ. ಬಸವಣ್ಣನವರ ಎರಡನೆಯ ಹೆಂಡತಿ. ಸಿದ್ಧರಸ ದಣ್ಣಾಯಕ ಹಾಗೂ ಪದ್ಮಗಂಧಿಯರ ಮಗಳು. ಸಿದ್ಧರಸ ಶಿವಾಧೀನನಾದ ಮೇಲೆ ಬಸವಣ್ಣನವರಿಗೆ ಬಿಜ್ಜಳ ಮಂತ್ರಿ ಪದವಿ ನೀಡಿ ಈಕೆಯನ್ನು ಮದುವೆ ಮಾಡಿಕೊಟ್ಟ. ಅನಂತರ ಈಕೆ ಅಧ್ಯಾತ್ಮಾರ್ಥಿಕ ಪ್ರಣಾಲಿಕಾಯಕ, ಆತ್ಮಸಾಕ್ಷಾತ್ಕಾರ ಪಥ ಹಾಗೂ ಸಿದ್ಧಾಂತ ಷಟ್ಸ್ಥಲ, ಶರಣ ದಾಸೋಹ ಮತ್ತು ಶಿವಾನುಭವಗಳಲ್ಲಿ ವಹಿಸಿದ ಪಾತ್ರ ಮಹತ್ತರವಾದುದಾಗಿದೆ. ಪತಿಸೇವೆ, ಜಂಗಮ ದಾಸೋಹ, ಲಿಂಗಾರ್ಚನೆ ಇವು-ಈಕೆಯ ವ್ಯಕ್ತಿತ್ವವನ್ನು ಹಿರಿದಾಗಿಸಿವೆ. ವೀರವಿರಾಗಿಣಿ ಅಕ್ಕಮಹಾದೇವಿ ತನ್ನ ಒಂದು ವಚನದಲ್ಲಿ ಅವ್ವ ನೀಲವ್ವನ ಮೋಹದ ಮಗಳು ತಾನೆಂದು ಹೇಳಿಕೊಂಡಿದ್ದಾಳೆ. ಅನುಭಾವಿ ನೀಲಮ್ಮ ಬಸವಣ್ಣನವರನ್ನು ಕೇವಲ ಪತಿಯೆಂದು ಭಾವಿಸದೆ ಗುರುವೆಂದು ದೇವರೆಂದು ನಂಬಿದ್ದಳು. ಈಕೆಯ ಏಕಮಾತ್ರ ಪುತ್ರ ಬಾಲಸಂಗಯ್ಯ ಚಿಕ್ಕಂದಿನಲ್ಲೆ ತೀರಿಕೊಂಡರೂ ಮಗನ ಮರಣದ ದುಃಖವನ್ನು ಶರಣರ ದಾಸೋಹದಲ್ಲಿ ಈಕೆ ಮರೆತಳು.

ಕಲ್ಯಾಣದ ಕ್ರಾಂತಿಯನ್ನು ನೋಡಲಾಗದ ಬಸವಣ್ಣ ಕೂಡಲಕ್ಕೆ ತೆರಳಿ ಶರಣ ಹಡಪದ ಅಪ್ಪಣ್ಣನವರ ಮೂಲಕ ಕಲ್ಯಾಣದಲ್ಲಿದ್ದ ತನ್ನ ಪತ್ನಿಯರನ್ನು ಕರೆತರುವಂತೆ ಹೇಳಿ ಕಳುಹಿಸಿದಾಗ ನೀಲಾಂಬಿಕೆ ಕೂಡಲಕ್ಕೆ ಹಿಂತಿರುಗಿ ಹೋಗಲು ನಿರಾಕರಿಸಿ ಬಸವರಸರೇ ತನ್ನ ಲಿಂಗದಲ್ಲಿರುವಾಗ ಸಂಗಯ್ಯನಸಾನ್ನಿಧ್ಯದ ಆಶೆ ತನಗಿಲ್ಲವೆಂದು ಹೇಳಿ ಕಳುಹಿಸಿ ಕಲ್ಯಾಣದಲ್ಲಿ ಕಷ್ಟದಲ್ಲಿದ್ದ ಶರಣರಿಗೆ ಬೆಂಬಲವಾಗಿ ನಿಲ್ಲುತ್ತಾಳೆ. ಈ ಒಂದು ವಚನ ಆಗಿನ ಆಕೆಯ ಮನೋಭಾವವನ್ನು ತಿಳಿಸುತ್ತದೆ.

ನಾನಾರ ಸಾರುವೆನೆಂದು ಚಿಂತಿಸಲೇಕಯ್ಯಾ?
ನಾನಾರ ಹೊಂದುವೆನೆಂದು ಭ್ರಮೆಪಡಲೇಕಯ್ಯಾ?
ನಾನಾರ ಇರವನರಿಯೆನೆಂದು ಪ್ರಳಾಪಿಸಲೇಕಯ್ಯಾ?
ಪರಿಣಾಮಮೂರ್ತಿ ಬಸವನರೂಪು ಕರಸ್ಥಲದಲ್ಲಿ ಬೆಳಗಿದ
ಬಳಿಕ ಸಂಗಯ್ಯನ ಹಂಗು ನಮಗೇತಕೆ ಅಪ್ಪಣ್ಣಾ

ಮುಂದೆ ಬಸವಣ್ಣನವರು ಕೂಡಲ ಸಂಗಮನಾಥನಲ್ಲಿ ಐಕ್ಯರಾದ ಸುದ್ದಿ ಕೇಳಿದ ನೀಲಾಂಬಿಕೆ ತನ್ನ ದುಃಖವನ್ನು ಶಮನಮಾಡಿಕೊಂಡು ಈ ರೀತಿ ಹೇಳಿಕೊಂಡು ತಾನೂ ಪರಶಿವನಲ್ಲಿ ಐಕ್ಯಳಾಗುತ್ತಾಳೆ.

ಮಡದಿ ಎನಲಾಗದು ಬಸವಂಗೆ ಎನ್ನನು
ಪುರುಷನೆನಲಾಗದು ಬಸವನ ಎನಗೆ
ಉಭಯಕುಲವ ಹರಿದು ಬಸವಂಗೆ ಶಿಶುನಾನಾದೆನು
ಬಸವನೆನ್ನ ಶಿಶುವಾದನು
ಪ್ರಮಥರು, ಪುರಾತನರು ಸಾಕ್ಷಿಯಾಗಿ ಸಂಗಯ್ಯನಿಕ್ಕಿದ ದಿವ್ಯವ ಮೀರದೆ
ಬಸವನೊಳಗಾನಡಗಿದೆ
ಎಲೆ ಅಯ್ಯ ಕರಸ್ಥಲ ಬಯಲಾಯಿತ್ತು, ಎನಗೆ ಕರಸ್ಥಲ ಮನಸ್ಥಲವಾಯಿತ್ತು
ಸಂಗಯ್ಯ ಬಸವಹೋದನತ್ತ ನಾನಡಗಿದೆನಯ್ಯ ನಿನ್ನತ್ತ

ಅಂದಿನ ಶರಣ ಶರಣೆಯರು ಈಕೆಯನ್ನು ನಿಜಭಕ್ತೆ ನೀಲಾಂಬಿಕೆ ಎಂದು ಗೌರವಿಸುತ್ತಿದ್ದರು. ನೀಲಾಂಬಿಕೆ, ನೀಲಲೋಚನೆ, ನೀಲಮ್ಮ, ನೀಲವ್ವ ಎಂದು ಜನಮನದಲ್ಲಿ ನಿಂತ ಈಕೆಯನ್ನು ಕುರಿತು ಅನೇಕರು ಗೀತ, ಸ್ತೋತ್ರ, ಸಾಂಗತ್ಯಗಳನ್ನು ರಚಿಸಿದ್ದಾರೆ. ನೀಲಮ್ಮನ ಸ್ತೋತ್ರ, ನೀಲಾಂಬಿಕಾ ಪಂಚವಿಂಶತಿ, ನೀಲಮ್ಮನ ತ್ರಿವಿಧಿ ಮೊದಲಾದವು ಈಕೆಯ ಸ್ತುತಿರೂಪಗ್ರಂಥಗಳು.

ಈಕೆ ಪ್ರಸಾದ ಸಂಪಾದನೆಯನ್ನೂ ಒಂದು ಕಾಲಜ್ಞಾನವನ್ನೂ ಬರೆದಿರುವಂತೆ ತಿಳಿಯುತ್ತದೆ.
(ಬಿ.ಎಸ್.; ವಿ.ಎಸ್.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ